ಇಡೀ ಭಾರತವನ್ನೇ ಆವರಿಸಿದ್ದ ಹಿಂದಿ ಚಿತ್ರರಂಗ ಮಕಾಡೆ ಮಲಗಿದ್ದು ಹೇಗೆ? ಪತನದ ಹಾದಿಯಲ್ಲಿ ಬಾಲಿವುಡ್…ಬಾಲಿವುಡ್ ಭಾರತದ ಅತೀ ಬೃಹತ್ ಸಿನಿರಂಗ. ಅದಕ್ಕೆ ದೇಶವ್ಯಾಪಿ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಹಿಂದೊಮ್ಮೆ ಇಡೀ ಭಾರತ ಚಿತ್ರರಂಗವನ್ನು ವಿಶ್ವದ ಎದುರು ಹೆಮ್ಮೆಯಿಂದ ಪ್ರತಿನಿಧಿಸಿದ ಹೆಮ್ಮೆ ಈ ಬಾಲಿವುಡ್ ನದಾಗಿತ್ತು. ವರ್ಷವೊಂದಕ್ಕೆ ನೂರಾರು ಸಂಖ್ಯೆಯಲ್ಲಿ ಬಾಲಿವುಡ್ನಲ್ಲಿ ಸಿನಿಮಾಗಳು ತಯಾರಾಗುತ್ತದೆ. ಸಮಾಜದ ಪ್ರತಿ ಕ್ಷೇತ್ರ ಹಾಗೂ ಆಯಾಮದ ಸುತ್ತ ಕಥೆ ಮಾಡಿ ಜನರ ಆಸಕ್ತಿಯನ್ನು ಸೆಳೆಯುತ್ತಿದ್ದ ಬಾಲಿವುಡ್ ಹಿಂದಿನ ವೈಭೋಗ ಈಗ ಗಣನೀಯವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಸತ್ವವಿಲ್ಲದ ಕಥೆಗಳಿಂದ ಬಾಲಿವುಡ್ ಇವತ್ತು ಎಲ್ಲಾ ಕಡೆ ತಿರಸ್ಕಾರ ಗೊಳ್ಳುತ್ತಿದೆ. ಕಂಟೆಂಟ್ ಇಲ್ಲದ ಕಥೆಗಳಿಗಾಗಿ ಬಾಲಿವುಡ್ ನೂರಾರು ಕೋಟಿ ವೇಸ್ಟ್ ಇನ್ವೆಸ್ಟ್ ಮಾಡುತ್ತಿದೆ ಎನ್ನುವ ಆರೋಪ ಈಗ ಬಾಲಿವುಡ್ ಮೇಲಿದೆ. ಬಾಲಿವುಡ್ ಈಗ ಕಥೆಗಳಿಗಾಗಿ ಸೌತ್ ಸಿನಿಮಾಗಳ ಕಡೆ ಮುಖ ಮಾಡಿದ್ದು, ಡಬ್ಬಿಂಗ್ ಹಾಗೂ ರಿಮೇಕ್ ಪರಂಪರೆ ಬಾಲಿವುಡ್ನಲ್ಲಿ ದಟ್ಟವಾಗಿದೆ.
ಬಾಲಿವುಡ್ನ ಹಳೆ ಜೀವಂತಿಕೆ ಹಾಗೂ ಸ್ವಂತಿಕೆ ಕೋಮಾಗೆ ಜಾರಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಿದ್ದ ಬಾಲಿವುಡ್ ಇಂದು ವಿಸ್ತಾರವಾದ ಪ್ರತಿಭೆಗಳು ಇದ್ದರೂ ಕೂಡ ಜನರ ಮನಸ್ಸನ್ನು ಗೆಲ್ಲಲು ಆಗದೆ ಯಾಕೆ ಮಸುಕಾಗಿದೆ ಎನ್ನುವುದು ಈಗ ಹಲವರ ಪ್ರಶ್ನೆಯಾಗಿದೆ. ಭಾರತದ ಮೊಟ್ಟಮೊದಲ ಸಿನಿಮಾರಂಗ ಎಂದು ಹೆಸರಾದ ಬಾಲಿವುಡ್ ಭಾರತದ ಹಳೆಯ ಹಾಗೂ ಮೊದಲ ಸಿನಿ ಇಂಡಸ್ಟ್ರಿ ಆಗಿದೆ. ಇದು ಶುರುವಾಗಿದ್ದು 1913ರಲ್ಲಿ. ಅಂದರೆ ಸ್ವತಂತ್ರ ಸಿಗುವ ಮುಂಚೆಯೇ ಹಲವಾರು ವರ್ಷಗಳ ಹಿಂದೆ. ಭಾರತದ ಸಿನಿ ಪ್ರಪಂಚದ ಪೂರ್ವ ಪಿತಾಮಹರು ಎಂದೇ ಸುಪ್ರಸಿದ್ಧವಾದ ಶ್ರೀ ದಿವಾಂಗತ ಬಾಬಾ ಸಾಹೇಬ್ ಫಾಲ್ಕೆ ಅವರ ರಾಜ ಹರಿಶ್ಚಂದ್ರ ಎನ್ನುವ ಮೂಖಿ ಚಿತ್ರವೇ ಭಾರತ ಹಾಗೂ ಬಾಲಿವುಡ್ನಲ್ಲಿ ತಯಾರಾದಂತಹ ಮೊದಲ ಚಿತ್ರ.
ಆಗ ಪಶ್ಚಿಮದ ಹಾಲಿವುಡ್ ಕ್ಷೇತ್ರವು ಹಲವಾರು ಮೂಖಿ ಹಾಸ್ಯ ಚಿತ್ರಗಳಿಂದ ಸಾಕಷ್ಟು ಸದ್ದನ್ನು ಮಾಡಿತ್ತು. ಇದನ್ನು ಅನುಸರಿಸಿದ ಭಾರತದ ಚಿತ್ರರಂಗ ಕೂಡ ತನ್ನದೇ ಶೈಲಿಯಲ್ಲಿ ಅದೇ ದಿಕ್ಕಲಿ ಚಲಿಸಲು ಶುರುಮಾಡಿತ್ತು. ಆಗ ಬಾಂಬೆ ಭಾರತದ ಮುಖ್ಯ ಚಲನಚಿತ್ರ ತಯಾರಿಕ ಕೇಂದ್ರವಾಗಿದ್ದು, ಬಾಂಬೆ ಹಾಗೂ ಹಾಲಿವುಡ್ ಎರಡರ ಮಿಶ್ರಣದಿಂದ ಭಾರತದಲ್ಲಿ ಬಾಲಿವುಡ್ ಎನ್ನುವ ಪರಂಪರೆ ಸೃಷ್ಟಿಯಾಯಿತು. ಬ್ರಿಟಿಷರ ಆಡಳಿತದ ಕಾಲದಲ್ಲಿ ಬಾಲಿವುಡ್ನಲ್ಲಿ ಭಾರತದ ಪೌರಾಣಿಕ ಸಿನಿಮಾಗಳು ತೆರೆ ಕಾಣುತ್ತಿದ್ದವು. ನಂತರದ ದಿನಗಳಲ್ಲಿ ರಾಜ್ ಕಪೂರ್ ಅವರ ರೀತಿಯ ಸುಪ್ರಸಿದ್ಧ ನಟರುಗಳು ಸಮಾಜದ ಬಡ ಹಾಗೂ ಕೂಲಿ ವರ್ಗದವರ ಸ್ಥಿತಿಗತಿಯ ಸುತ್ತ ಇದ್ದ ವಾಸ್ತವದ ಪರಿಸ್ಥಿತಿಗಳು ಹೇಗಿರುತ್ತದೆ ಎನ್ನುವ ಕಥೆಗಳನ್ನು ಅತ್ಯಂತ ನೈಜವಾಗಿ ಹಾಗೂ ಪರಿಣಾಮಕಾರಿಯಾಗಿ ನೀಡುತ್ತಾ ಬಂದರು.