ಮಂಗರವಳ್ಳಿ ಆಯುರ್ವೇದ ಔಷಧಿ ಸಸ್ಯ.ನಮಸ್ತೇ ಸ್ನೇಹಿತರೆ, ನೀವು ಹಲವಾರು ಔಷಧೀಯ ಗುಣಗಳಿರುವ ಬಳ್ಳಿಗಳು ಅಥವಾ ಗಿಡಗಳನ್ನು ನೋಡಿದ್ದೀರಿ ಮತ್ತು ಅವುಗಳ ಪ್ರಯೋಜನವನ್ನು ತಿಳಿದಿದ್ದೀರಿ. ಅದೇ ರೀತಿ ಒಂದು ಬಳ್ಳಿ ಇದೆ ಇದರ ಹೆಸರು ಮಂಗರವಳ್ಳಿ. ಭಾರತದಾದ್ಯಂತ ಬೆಳೆಯುವ ಮಂಗರವಳ್ಳಿಯನ್ನು ಮುರಿದ ಮೂಳೆಗಳನ್ನು ಜೋಡಿಸುವ ಗುಣವಿರುವುದಕ್ಕಾಗಿ ಸಂಸ್ಕೃತದಲ್ಲಿ ಅಸ್ಥಿಶೃಂಖಲ ಎಂದು ಕರೆಯಲಾಗುತ್ತದೆ. ಇದೊಂದು ಬಳ್ಳಿ ಗಿಡ. ಇದನ್ನು ಸಂದು ಬಳ್ಳಿ, ಸಂದಕದ ಗಿಡ ಎಂದೂ ಕರೆಯುವುದುಂಟು. ಎಲ್ಲೆಡೆ ಆಲಂಕಾರಿಕ ಗಿಡವಾಗಿ ಬೆಳೆಯುತ್ತಾರಾದರೂ ಇದರ ಔಷಧಿ ಗುಣಗಳ ಪರಿಚಯ ಅನೇಕರಿಗಿಲ್ಲ. ನೆರಲೆಕುಡಿ ಅಂತಲೂ ಹೆಸರಿರುವ ಈ ಕ್ಯಾಕ್ಟಸ್ ಜಾತಿಯ ಬಳ್ಳಿ ಹಪ್ಪಳದ ಖಾರಕ್ಕೆ ಅತೀ ಅವಶ್ಯ. ಕಾಂಡವು ಮೃದುವಾಗಿದ್ದು, ಬೇರೆ ಗಿಡಗಳನ್ನು ಆಶ್ರಯಿಸಿ ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಬೆಳೆಯುವುದು, ಹಸಿರು ಬಣ್ಣದ ಕಾಂಡವು ರಸಭರಿತವಾಗಿದ್ದು, ಚಪ್ಪಟೆಯಾಗಿ, ಚೌಕೋನದಂತೆ ಇರುವುದು. ಕಾಂಡದ ಮೇಲೆ ಎರಡು ಅಂಗುಲ ಅಂತರದಲ್ಲಿ ಒಂದೊಂದು ಗಿಣ್ಣು ಇರುವುದು. ಪ್ರತಿ ಗಿಣ್ಣಿನಲ್ಲಿ ಒಂದು ಚಿಕ್ಕದಾದ ಹಸಿರೆಲೆ ಇರುವುದು.ಜುಲೈ ತಿಂಗಳಲ್ಲಿ ಹೂವು ಕಂಡುಬರುತ್ತದೆ.ಇದರಲ್ಲಿ ೩ ಮೂಲೆಯ ಮಂಗರವಳ್ಳಿ ಸಹ ಕಂಡುಬರುತ್ತದೆ.
ಹಾಗಾದರೆ ಈ ಮಂಗರವಳ್ಳಿ ಯಿಂದಾಗುವ ಉಪಯೋಗವನ್ನು ತಿಳಿಯೋಣ ಬನ್ನಿ. ಮೂಳೆ ಮುರಿದಾಗ ಮಂಗರವಳ್ಳಿಯ ಕಾಂಡವನ್ನು ಜಜ್ಜಿ ಮುರಿದ ಸ್ಥಳದಲ್ಲಿ ಪಟ್ಟು ಹಾಕಬೇಕು. ನಾಟಿವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಳೆ ಮುರಿದಾಗ ಈ ಬಳ್ಳಿಯನ್ನು ಚಿಕಿತ್ಸೆಗೆ ಉಪಯೋಗಿಸುತ್ತಾರೆ. ಮೂಲವ್ಯಾಧಿಯಿಂದ ಬಳಲುವವರು ಮಂಗರವಳ್ಳಿಯನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಬೆರೆಸಿ ಕುಡಿಯಬೇಕು ಮತ್ತು ಮೂಲವ್ಯಾಧಿಯ ಮೊಳಕೆಗೆ ಲೇಪಿಸಬೇಕು. ಗಾಯಗಳಾಗಿರುವಾಗ ಜಾಗಕ್ಕೆ ಮಂಗರವಳ್ಳಿ ಜಜ್ಜಿ ಲೇಪಿಸಿದಲ್ಲಿ ಬೇಗನೇ ಮಾಯುತ್ತದೆ. ಚರ್ಮರೋಗಗಳಿಂದ ಬಳಲುವವರು ಮಂಗರವಳ್ಳಿ ಜಜ್ಜಿ ರಸ ತೆಗೆದು ಎರಡು ಚಮಚ ರಸವನ್ನು ಸೇವಿಸುವುದಲ್ಲದೇ ಮೇಲೆ ಲೇಪಿಸಬೇಕು. ಮೂತ್ರ ಕಟ್ಟಿದಲ್ಲಿ ಒಣಗಿದ ಕಾಂಡದ ಪುಡಿಯಿಂದ ಕಷಾಯ ತಯಾರಿಸಿ ಕುಡಿಯಬೇಕು.
ಇದು ಅತಿ ಹೆಚ್ಚು ಕ್ಯಾಲ್ಶಿಯಂ ಅನ್ನು ಹೊಂದಿರುವ ಬಳ್ಳಿಯಾಗಿದೆ ಮತ್ತು ಇದರ ಬೇರನ್ನು ತಿಂದರೆ ಅತಿ ಹೆಚ್ಚು ಬುದ್ಧಿ ಶಕ್ತಿ ನಮಗೆ ವೃದ್ಧಿಸುತ್ತದೆ. ಈ ಮಂಗರವಳ್ಳಿ ಬಳ್ಳಿಯನ್ನು ಮನುಷ್ಯರು ಮಾತ್ರ ಉಪಯೋಗಿಸ ಬೇಕು ಅಂತೇನು ಇಲ್ಲ ಇದು ಪ್ರಾಣಿಗಳಿಗೂ ತುಂಬಾ ಉಪಯುಕ್ತವಾಗುತ್ತದೆ. ಪ್ರಾಣಿಗಳ ಮೂಳೆಗಳು ಮುರಿದರೆ ಅಥವಾ ಇದನ್ನು ತಿಂದರೆ ಅದು ಸರಿಯಾಗುತ್ತದೆ ಮತ್ತು ಇದರಲ್ಲಿ ಹೇರಳವಾಗಿ ಸಿಗುವ ಕ್ಯಾಲ್ಷಿಯಂ ನಿಂದಾಗಿ ನಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಈ ಮಂಗರವಳ್ಳಿ ಬಳ್ಳಿಯೂ ಬಲಿಷ್ಠಗೊಳಿಸುತ್ತದೆ.
ಈ ಮಂಗರವಳ್ಳಿ ಬಳ್ಳಿಯೂ ಐವತ್ತರಿಂದ ನೂರು ವರ್ಷಗಳ ಕಾಲ ಬರುತ್ತದೆ ಈ ಮಂಗರವಳ್ಳಿ ಬಳ್ಳಿಯೂ ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿದೆ. ನಮ್ಮ ಜನರು ಇದರಲ್ಲಿರುವ ವೈದ್ಯಕೀಯ ಗುಣವನ್ನು ಅರಿತು ಇದನ್ನು ಹೆಚ್ಚು ಉಪಯೋಗಿಸಬೇಕು. ಇದೇ ರೀತಿ ಇದರಿಂದಾಗುವ ಲಾಭಗಳನ್ನು ಪಡೆದುಕೊಳ್ಳಬೇಕು.